ಬಹ್ರೇನ್
	ಪರ್ಷಿಯಾ ಕೊಲ್ಲಿಯ ಸಣ್ಣ ಅರಬ್ ಅಮೀರ್ ಪ್ರಭುತ್ವ (ಎಮೀರೇಟ್). ಬಹ್ರೇನ್ ಮತ್ತು 30 ಸಣ್ಣ ದ್ವೀಪಗಳ ಸಮುಚ್ಚಯ. ಪರ್ಷಿಯ ಕೊಲ್ಲಿಯ ದಕ್ಷಿಣ ತೀರದಲ್ಲಿ, ಸೌದಿ ಅರೇಬಿಯದ ಈಶಾನ್ಯ ಹಾಸಾ ಕರಾವಳಿಗೂ ಕಾಟಾರ್ ಪರ್ಯಾಯ ದ್ವೀಪಕ್ಕೂ ನಡುವಣ ಕೊಲ್ಲಿಯೊಂದರಲ್ಲಿದೆ. ಇದರ ಅರಬ್ಬಿ ಹೆಸರು ಅಲ್‍ಬಹ್ರೆಯ್ನ್. ಎರಡು ಸಮುದ್ರಗಳು ಎಂದು ಅರ್ಥ. ಒಟ್ಟು ಭೂ ವಿಸ್ತೀರ್ಣ 694ಚ.ಕಿಮೀ. ಜನಸಂಖ್ಯೆ 6,33,000 (2000).

	ಭೌತಲಕ್ಷಣ: ಬಹ್ರೇನಿನಲ್ಲಿ ಎರಡು ಪ್ರತ್ಯೇಕ ದ್ವೀಪಸ್ತೋಮಗಳಿವೆ. ಮೊದಲನೆಯ ಗುಂಪಿನಲ್ಲಿ ಅತ್ಯಂತ ದೊಡ್ಡದಾದ ಬಹ್ರೇನ್ ದ್ವೀಪದ ಸುತ್ತ ಹಲವು ಸಣ್ಣ ದ್ವೀಪಗಳಿವೆ. ಇವುಗಳ ಪೈಕಿ ಅಲ್-ಮುಹಾರಕ್ ಮತ್ತು ಸಿತ್ತಾ ದ್ವೀಪಗಳಿಗೂ ಬಹ್ರೇನ್ ದ್ವೀಪಕ್ಕೂ ಸೇತುವೆಗಳಿವೆ. ಈ ಗುಂಪಿನ ಇತರ ದ್ವೀಪಗಳು ಅನ್-ನಬೀ ಸಾಲಿಹ್ ಉಮ್ ಅಸ್ಸಬಾನ್, ಉಮ್‍ನಸಾನ್ ಮತ್ತು ಜಿದ್ದಾ. ಎರಡನೆಯ ಗುಂಪಿನ ಹೊವಾರ್ ದ್ವೀಪಗಳು ಕಾಟಾರ್ ತೀರಕ್ಕೆ ಸಮೀಪದಲ್ಲಿವೆ. ಇವು ಬಲು ಸಣ್ಣವು ಮತ್ತು ಬಂಡೆಗಳಿಂದ ಕೂಡಿದವು. ಇಲ್ಲಿ ಜನರು ಹೆಚ್ಚು ಸಂಖ್ಯೆಯಲ್ಲಿಲ್ಲ. ಇರುವವರು ಪ್ರಮುಖವಾಗಿ ಮೀನುಗಾರರು ಹಾಗೂ ಕಲ್ಕುಣಿ ಕೆಲಸಗಾರರು.

	ಎರಡೂ ಗುಂಪುಗಳ ಸಣ್ಣ ದ್ವೀಪಗಳೆಲ್ಲ ಬಂಡೆಗಳಿಂದ ಕೂಡಿದ್ದು ಸಮುದ್ರ ಮಟ್ಟದಿಂದ ಕೆಲವೇ ಮೀಟರ್ ಎತ್ತರದಲ್ಲಿವೆ. ಮುಖ್ಯ ದ್ವೀಪ ವೈವಿಧ್ಯಪೂರಿತ ಕಮಾನಿನಂತಿರುವ ಅದರ ಬಂಡೆಗಳು ಸುಣ್ಣಕಲ್ಲು, ಮರುಳುಗಲ್ಲು ಮತ್ತು ಜೇಡಿಮಣ್ಣು ಮರುಳುಮಿಶ್ರಿತ ಕಲ್ಲುಗಳಿಂದ ಕೂಡಿವೆ. ಈ ದ್ವೀಪದ ಮಧ್ಯಭಾಗದಲ್ಲಿ ಸಮುದ್ರ ಮಟ್ಟದಿಂದ ಸುಮಾರು 135ಮೀ ಎತ್ತರಕ್ಕಿರುವ ಜಬದ್ ಅದ್-ದುಬಾನ್ ಎಂಬ ಬೆಟ್ಟವಿದೆ. ಇದೂ ಶಿಲೆಯಿಂದ ಕೂಡಿದೆ. ಜೊತೆಗೆ ಬಂಜರು ಕೂಡ. ದಕ್ಷಿಣ ಮತ್ತು ಪಶ್ಚಿಮದ ತಗ್ಗು ನೆಲಗಳು ಮರುಳು ಮೈದಾನಗಳು. ಅಲ್ಲಲ್ಲಿ ಚವುಳು ಜೌಗುಗಳುಂಟು. ಉತ್ತರ ಹಾಗೂ ವಾಯವ್ಯ ಪ್ರದೇಶಗಳು ಭಿನ್ನ. ಇಲ್ಲಿ ಖರ್ಜೂರ ಮತ್ತು ತರಕಾರಿ ತೋಟಗಳ ಸಾಲುಗಳಿವೆ. ಇಲ್ಲಿಯ ಜನರು ಆರ್ಟೀಸಿಯನ್ ಬಾವಿಯ ನೀರು ಬಳಸಿಕೊಂಡು ಬೇಸಾಯ ಮಾಡುತ್ತಾರೆ.

	ವಾಯುಗುಣ: ವರ್ಷವಿಡೀ ಇಲ್ಲಿಯ ವಾತಾವರಣ ತೇವದಿಂದ ಕೂಡಿರುತ್ತದೆ. ಮೇಯಿಂದ ಅಕ್ಟೋಬರ್ ತನಕ ಮಾಸಿಕ ಮಾಧ್ಯ ಉಷ್ಣತೆ 29(ಅ ಡಿಸೆಂಬರಿನಿಂದ ಮಾರ್ಚ್‍ತನಕ 21(ಅ ಮಳೆ ಬಹುತೇಕ ಚಳಿಗಾಲದಲ್ಲೇ, ವಾರ್ಷಿಕ ಸರಾಸರಿ 7.5 ಸೆಂ ಮೀ ಮಾತ್ರ. ವಾಯುವ್ಯದಿಂದ ಬೀಸುವ ಷಮಾಲ್ ಎಂಬುದೇ ಪ್ರಮುಖ ಮಾರುತ. ಇದು ತೇವದಿಂದ ಕೂಡಿದ ಶೀತಗಾಳಿ. ದಕ್ಷಿಣದಿಂದ ಬೀಸುವ ಗಾಳಿ ಬಿಸಿ, ಶುಷ್ಕ. ಇದು ಆಗಾಗ್ಗೆ ಮರಳನ್ನೂ ದೂಳನ್ನು ತರುವುದುಂಟು.

	ಸಸ್ಯಪ್ರಾಣಿ ಜೀವನ: ಈ ದ್ವೀಪಗಳ ನಗ್ನ ಶುಷ್ಕ ಭಾಗಗಳಲ್ಲಿ ಸುಮಾರು ಇನ್ನೂರು ಬಗೆಯ ಮರುಭೂಮಿ ಸಸ್ಯಗಳು ಬೆಳೆಯುತ್ತವೆ. ನೀರಾವರಿ ಸೌಲಭ್ಯವಿರುವ ಬೇಸಾಯದ ನೆಲದಲ್ಲಿ ಹಣ್ಣಿನ ಮರ, ಪ್ರಾಣಿಗಳ ಮೇವು ಮತ್ತು ತರಕಾರಿ ಬೆಳೆಸುತ್ತಾರೆ. ಮರುಭೂಮಿಗೆ ಹೊಂದಿಕೊಳ್ಳಬಲ್ಲ ಪ್ರಾಣಿಗಳು ಮಾತ್ರ ಇಲ್ಲಿವೆ. ಗಜೆಲ್ ಮತ್ತು ಮೊಲ ಪೂರ್ಣ ನಷ್ಟಜೀವಿಗಳಾಗಿಲ್ಲ. ಹಲ್ಲಿಗಳೂ ಮರುಭೂಮಿ ಇಲಿಗಳೂ ಸಾಮಾನ್ಯ. ನೀರಾವರಿ ಪ್ರದೇಶಗಳಲ್ಲಿ ಮುಂಗುಸಿಗಳಿವೆ. ಬಹುಶಃ ಇವನ್ನು ಭಾರತದಿಂದ ತಂದಿರಬೇಕು. ಯೂರೋಪ್, ಏಷ್ಯ ಮತ್ತು ಆಫ್ರಿಕ ಮೂಲದ ಅನೇಕ ಬಗೆಯ ಹಕ್ಕಿಗಳು ಇಲ್ಲಿವೆ.

	ಮಾನವ ವಸತಿ: ಬಹ್ರೇನ್ ದ್ವೀಪದ ಉತ್ತರದಲ್ಲಿ ನೆಲ ಫಲವತ್ತಾಗಿದೆ. ಇಲ್ಲಿ ನೀರಾವರಿ ಸೌಲಭ್ಯವಿರುವುದರಿಂದ ಖರ್ಜೂರ, ಬಾಳೆ ನಿಂಬೆ ಜಾತಿಯ ಹಣ್ಣುಗಳು, ಮಾವು ಮುಂತಾದವು ಬೆಳೆಯುತ್ತವೆ. ಮರಗಳ ನೆರಳಿನಲ್ಲಿ ತರಕಾರಿಗಳನ್ನೂ ಅಲ್ಫಾಲ್ಫ ಹುಲ್ಲನ್ನೂ ಬೆಳೆಸಲಾಗುತ್ತದೆ. ದನಗಳೂ ಇವೆ. ಇಲ್ಲಿಯ ಹಳ್ಳಿಗಳಲ್ಲಿಯ ಮನೆಗಳು ಸಾಮಾನ್ಯವಾಗಿ ಸ್ಥಳೀಯವಾಗಿ ದೊರೆಕುವ ಕಲ್ಲುಗಳಿಂದ ಅಥವಾ ಸಿಮೆಂಟಿನಿಂದ ನಿರ್ಮಿಸಿದವು. ಇವುಗಳ ತಾರಸಿಗಳು ಮಟ್ಟಸವಾಗಿರುತ್ತವೆ. ಮೀನುಗಾರರು ಹಾಗೂ ಅರೆ ಬಡವರು ಖರ್ಜೂರದ ಗಿಡಗಳ ಕಡ್ಡಿಗಳಿಂದ ಕಟ್ಟಿದ ಗುಡಿಸಿಲುಗಳಲ್ಲಿ ವಾಸಿಸುತ್ತಾರೆ. ದಕ್ಷಿಣ ಬಹ್ರೇನಿನಲ್ಲಿ ಖಾಯಂ ಜನವಸತಿ ಬಲುವಿರಳ.

	ಬಹ್ರೇನ್ ರಾಜ್ಯದ ದೊಡ್ಡ ಪಟ್ಟಣಗಳು ಎರಡು. ಅಲ್-ಮನಾಮಾ ಪಟ್ಟಣ ಪೂರ್ವ-ಪಶ್ಚಿಮ ಶೈಲಿಗಳ ಮಿಶ್ರಣ. ಇಲ್ಲಿ ಅನೇಕ ದೊಡ್ಡ ಹೋಟಲುಗಳು, ಮುಖ್ಯ ಸರಕಾರಿ ಕಛೇರಿ, ಶಾಲೆ ಪಾಶ್ಚಾತ್ಯ ಶೈಲಿಯ ಅಂಗಡಿ ಮತ್ತು ಅರಬ್ ಬಜಾರ್ ಇವೆ. ಇದೊಂದು ರೇವು ಪಟ್ಟಣ. ಅಲ್-ಮುಹರ್ರಕ್ ಇಂದಿಗೂ ಹಳೆಯ ಅರಬ್ ಶೈಲಿಯಲ್ಲೇ ಇದೆ. ಇದರ ಬೀದಿಗಳು ಕಿರಿದು ಅಂಕುಡೊಂಕು. ಜನನಿಬಿಡ ಪಟ್ಟಣವಿದು. ಅವಾಲೀಯಲ್ಲಿ ಸಾಲು ಮರಗಳಿಂದ ಕೂಡಿದ ಅಗಲ ರಸ್ತೆಗಳಿವೆ. ಬಹ್ರೇನ್ ಪೆಟ್ರೋಲಿಯಮ್ ಕಂಪೆನಿಯಿಂದ ನಿವೃತ್ತಿಹೊಂದಿದ ನೌಕರರು ಇಲ್ಲಿ ಜಂಗಲ್ ಮಾದರಿಯ ಮನೆಗಳಲ್ಲಿ ವಾಸಿಸುತ್ತಾರೆ. ಇಸ ಪಟ್ಟಣ 1968ರಲ್ಲಿ ಸ್ಥಾಪಿತವಾಯಿತು. ಇಲ್ಲಿ ಸುಮಾರು 15,000 ಆಧುನಿಕ ರೀತಿಯ ಮನೆಗಳನ್ನು ನಿರ್ಮಿಸಲಾಗಿದೆ.

	ಇಲ್ಲಿಯ ಜನರಲ್ಲಿ ಶೇಕಡಾ 82.5ರಷ್ಟು ಮಂದಿ ಬಹ್ರೇನಿಯನರು ಶೇಕಡಾ 5ರಷ್ಟು ಮಂದಿ ಒಮಾನಿಗಳು ಉಳಿದವರ ಪೈಕಿ ಭಾರತೀಯರೂ ಪಾಕಿಸ್ತಾನಿಗಳೂ ಇರಾನಿಗಳೂ ಮತ್ತು ಬ್ರಿಟಿಷರೂ ಇದ್ದಾರೆ ಮುಸ್ಲಿಮರಲ್ಲಿ ಸುನ್ನಿಗಳೂ ಷಿಯಾಗಳೂ ಸಮಸಮ ಇದ್ದಾರೆ. ಸುನ್ನಿಗಳು ಅರಸು ಮನೆತನದವರಾಗಿದ್ದು ಶ್ರೀಮಂತರೂ ಪ್ರಭಾವಶಾಲಿಗಳೂ ಆಗಿದ್ದಾರೆ.

	ಆರಬ್ಬಿ ಇಲ್ಲಿಯ ಅಧಿಕೃತ ಭಾಷೆ. ಅನೇಕರಿಗೆ ಇಂಗ್ಲಿಷ್ ಅರ್ಥವಾಗುತ್ತದೆ. 

ಆರ್ಥಿಕತೆ: ಬಹ್ರೇನಿನಲ್ಲಿ 1932ರಲ್ಲಿ ತೈಲದ ಪತ್ತೆಯಾಯಿತು. 1934ರಿಂದ ಇದರ ಉತ್ಪಾದನೆಯಾಗುತ್ತಿದೆ. ಆದರೆ ವಾರ್ಷಿಕ ಉತ್ಪನ್ನ ಬಲು ಕಡಿಮೆ. ಜಬಲ್ ಅದ್-ದುಖಾನ್ ಪ್ರಮುಖ ಎಣ್ಣೆ ಗಣಿ. ಸಿತ್ತಾದಲ್ಲಿ ತೈಲ ಸಂಸ್ಕರಣ ಕೇಂದ್ರವಿದೆ. ಬಹ್ರೇನ್ ತೈಲೋತ್ಪಾದಕ ದೇಶವೆನ್ನುವುದಕ್ಕಿಂತ ಅಧಿಕವಾಗಿ ತೈಲನಿರ್ಯಾತದಾರ ದೇಶವಾಗಿದೆ. ಸೌದಿ ಅರೇಬಿಯಾದಲ್ಲಿ ಸಮುದ್ರತಳದಿಂದ ತೈಲ ತೆಗೆಯುವ ಬ್ರಿಟಿಷ್ ಮತ್ತು ಅಮೆರಿಕನ್ ಕಂಪೆನಿಗಳು ಇಲ್ಲಿ ತೈಲ ಸಂಸ್ಕರಿಸಿ ರಫ್ತುಮಾಡುತ್ತಿವೆ.

ದೋಣಿ ನಿರ್ಮಾಣ, ಮೀನುಗಾರಿಕೆ, ಮುತ್ತು ಆರಿಸುವುದು ಮತ್ತು ಜೊಂಡಿನಿಂದ ಚಾಪೆ ಹೆಣೆಯುವುದು ಬಹ್ರೇನಿನ ಪರಂಪರಾನುಗತ ವೃತ್ತಿಗಳು. ಇವು ಈಗ ಕ್ಷೀಣಿಸಿವೆ. ಮೀನಾ ಸಾಲ್ಮಾನಿನಲ್ಲಿ ಹಡಗು ರಿಪೇರಿ ಕೆಲಸ ನಡೆಯುತ್ತಿದೆ. ಕಟ್ಟಡ ಸಾಮಗ್ರಿ, ಲಘು ಪಾನೀಯಗಳು ಮತ್ತು ಇತರ ಅನುಭೋಗ ವಸ್ತುಗಳು ಈ ದೇಶದಲ್ಲಿ ತಯಾರಾಗುತ್ತವೆ. ಇಲ್ಲಿಯ ಜನಕ್ಕೆ ಸಾಕಾಗುವಷ್ಟು ಆಹಾರ ಪದಾರ್ಥಗಳನ್ನು ಇಲ್ಲಿ ಉತ್ಪಾದಿಸುತ್ತಾರೆ.

ಆಡಳಿತ, ಸಾಮಾಜಿಕ ಸ್ಥಿತಿ: ಬಹ್ರೇನ್ ಬಹುತೇಕ ಒಂದು ಕಲ್ಯಾಣ ರಾಜ್ಯ. ಇಲ್ಲಿ ವೈದ್ಯ ಸೌಲಭ್ಯ ಮತ್ತು ಶಿಕ್ಷಣ ಉಚಿತ. ಸಾರಿಗೆ ವಸತಿ ನಿರ್ಮಾಣಕ್ಕೆ ಸರ್ಕಾರ ಸಹಾಯ ಧನ ನೀಡುತ್ತದೆ. ಇಲ್ಲಿಯ ದೊರೆಗೆ ಸಹಾಯ ಮಾಡಲು ಆಡಳಿತ ಮಂಡಳಿಯಿದೆ. ವಿವಿಧ ಇಲಾಖೆಗಳ ಮುಖ್ಯರು ಈ ಮಂಡಳಿಯ ಸದಸ್ಯರು. ಇವರಲ್ಲಿ ಬಹುಮಂದಿ ರಾಜಮನೆತನಕ್ಕೆ ಸೇರಿದವರು.

ಇತಿಹಾಸ: ಇತಿಹಾಸಪೂರ್ವ ಕಾಲದಿಂದಲೂ ಇಲ್ಲಿ ಜನ ವಸತಿ ಇದೆ. ಕ್ರಿಪೂ 3000ದಷ್ಟು ಹಿಂದಿನ ಸಾವಿರಾರು ಸಮಾಧಿಗಳು ಉತ್ತರ ಬಹ್ರೇನ್ ದ್ವೀಪದಲ್ಲಿ ಕಂಡುಬಂದಿವೆ. ಪರ್ಷಿಯನ್, ಗ್ರೀಕ್ ಮತ್ತು ರೋಮನ್ ಭೂಗೋಳಶಾಸ್ತ್ರಜ್ಞರು ಈ ದ್ವೀಪಸ್ತೋಮವನ್ನು ಹೆಸರಿಸಿದ್ದಾರೆ. ಕ್ರಿ.ಶ. 7ನೆಯ ಶತಮಾನದಲ್ಲಿ ಮುಸ್ಲಿಮರು ಇದನ್ನು ಜಯಿಸಿದರು. ಆಗಿನಿಂದಲೂ ಇಲ್ಲಿಯ ಜನ ಅರಬ್ ಮುಸ್ಲಿಮರು. ಆಗಾಗ ಇದನ್ನು ಪೊರ್ಚುಗೀಸರೂ (1521-1602) ಪರ್ಷಿಯನರೂ (1602-1783) ಆಳಿದ್ದಾರೆ. 1783ರಿಂದ ಇದು ಅಲ್-ಖಲೀಫಾ ಮನೆತನದ ಷೇಖರ ಆಳ್ವಿಕೆಗೆ ಒಳಪಟ್ಟಿದೆ. ಇವರು ಮೂಲತಃ ಅರೇಬಿಯದ ಹಾಸಾ ಪ್ರಾಂತ್ಯದಿಂದ ಬಂದವರು. 19ನೆಯ ಶತಮಾನದಲ್ಲಿ ಬ್ರಿಟಿಷರು ಈ ದೇಶದ ವ್ಯವಹಾರಗಳಲ್ಲಿ ಕೈಹಾಕುತ್ತಿದ್ದರು. ಯುದ್ಧ ಮತ್ತು ಕಡಲುಗಳ್ಳತನವನ್ನು ಹತ್ತಿಕ್ಕುವುದೂ ಈಜಿಪ್ಟ್ ಪರ್ಷಿಯ, ಜರ್ಮನಿ ಹಾಗೂ ರಷ್ಯದ ಪ್ರಭಾವವನ್ನು ತಪ್ಪಿಸುವುದೂ ಬ್ರಿಟಿಷರ ಪ್ರವೇಶದ ಉದ್ದೇಶ. 1820ರಲ್ಲಿ ಬ್ರಿಟಿಷರಿಗೂ ಬಹ್ರೇನಿಗೂ ಒಪ್ಪಂದವಾಯಿತು. 1861ರಿಂದ ಇಲ್ಲಿಯ ಷೇಖ್ ಬ್ರಿಟಿಷರ ರಕ್ಷಣೆಗೆ ಒಳಪಟ್ಟ. ಇದರ ವಿದೇಶಾಂಗ ವ್ಯವಹಾರ ಹಾಗೂ ರಕ್ಷಣೆಯ ಹೊಣೆ ಬ್ರಿಟಿಷರು ವಹಿಸಿಕೊಂಡಿದ್ದರು. ಬಹ್ರೇನ್ ತನಗೆ ಸೇರಬೇಕೆಂದು 1970ರ ತನಕವೂ ಇರಾನ್ ಆಗಿಂದಾಗ್ಯೆ ಹೇಳುತ್ತಿತ್ತು. ಆದರೆ ಈ ಕೇಳಿಕೆಯನ್ನು ನಿರಾಕರಿಸಲಾಗುತ್ತಿತ್ತು. 1971ರಲ್ಲಿ ಬಹ್ರೇನ್ ಸ್ವಾತಂತ್ರ್ಯ ಘೋಷಿಸಿಕೊಂಡು ವಿಶ್ವಸಂಸ್ಥೆಯ ಸದಸ್ಯತ್ವ ಪಡೆದುಕೊಂಡಿತು.
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ